ಕ್ರಿಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳು 

	ಚರ್ಚು ಮತ್ತು ರಾಜ್ಯಗಳ ನಡುವೆ ಉಂಟಾದ ವೈಮನಸ್ಸಿನಿಂದ ಹುಟ್ಟಿಕೊಂಡ ಆಧುನಿಕ ಕ್ರಿಶ್ಚನ್ ಪಕ್ಷಗಳು. ಈ ಪಕ್ಷಗಳೂ ಮೊದಲಿಗೆ ಹುಟ್ಟಿಕೊಂಡಿದ್ದು ಜರ್ಮನಿ, ಬೆಲ್ಜಿಯಂ, ಸ್ವಿಟ್ಜರ್ಲೆಂಡ್‍ಗಳ ಕೆಥೊಲಿಕರಲ್ಲಿ. ನೆದರ್ಲೆಂಡ್ಸಿನ ಕೆಥೊಲಿಕರೊಂದಿಗೆ ಪ್ರಾಟೆಸ್ಟಂಟರೂ ಇದರಲ್ಲಿ ಭಾಗಿಗಳಾದರು. ಚರ್ಚಿನ ಸ್ವಾತಂತ್ರ್ಯ ಕಾಪಾಡುವುದು, ಶಾಲೆಗಳಲ್ಲಿ ಕ್ರೈಸ್ತ ತಂದೆ ತಾಯಿಗಳ ಹಕ್ಕುಗಳನ್ನು ಉದಾರವಾದಿಗಳ, ರಾಷ್ಟ್ರೀಯವಾದಿಗಳ ಮತ್ತು ಅನಂತರ ಬಂದ ಸಮಾಜವಾದಿಗಳ ದಾಳಿಗಳಿಂದ ರಕ್ಷಿಸುವುದು ಇವುಗಳ ಮುಖ್ಯ ಗುರಿ. ಹೀಗೆ ಧಾರ್ಮಿಕ ಕ್ಷೇತ್ರದ ಮೇಲೆ ರಾಜಕೀಯ ಪಕ್ಷಗಳ ನೇರ ಕೈವಾಡ ಬಂದೊದಗದಿದ್ದರೆ ಇಂಥ ಪಕ್ಷಗಳೂ ಉದಯವಾಗುತ್ತಿರಲಿಲ್ಲ. ಯೂರೋಪಿನ ರಾಜಕೀಯದ ಒಲವು 1880ರಿಂದ ಆಚೆ ಸಾಮಾಜಿಕ ಸುಧಾರಣೆಯ ಕಡೆ ವಾಲಿತಷ್ಟೆ. ಇದು ಎಲ್ಲೆಲ್ಲಿ ಸಂಭವಿಸಿತೋ ಅಲ್ಲೆಲ್ಲ ಕ್ರೈಸ್ತರು ತಮ್ಮದೇ ಆದ ಸಾಮಾಜಿಕ, ಕಾರ್ಮಿಕ, ರೈತ, ಯುವಕ, ಮತ್ತು ಮಹಿಳಾ ಚಳವಳಿಯನ್ನಾರಂಭಿಸಿದರು. ಕ್ರಮೇಣ ಇವೆಲ್ಲ ಕ್ರೈಸ್ತ ರಾಜಕೀಯ ಪಕ್ಷಗಳಾಗಿ ಮಾರ್ಪಾಡಾದುವು.

	ಒಂದನೆಯ ಮಹಾಯುದ್ಧದ ಅನಂತರ ಈ ಪಕ್ಷಗಳು ಚರ್ಚಿನ ಹಿತಾಸಕ್ತಿಗಿಂತ ರಾಜಕೀಯ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ನಾಗರಿಕರ ಹಿತಾಸಕ್ತಿಗಳತ್ತ ಹೆಚ್ಚಿನ ಗಮನ ನೀಡಿದುವು. ಈ ಕಾಲದಲ್ಲಿ ಸ್ಥಾಪಿತವಾದ ಪ್ರಮುಖ ಪಕ್ಷಗಳೆಂದರೆ ಫ್ರಾನ್ಸಿನಲ್ಲಿ ಪಾರ್ಟಿ ಡೆಮೊಕ್ರೇಟ್ ಪಾಪ್ಯುಲೇರ್ (1924). ಇಟಲಿಯಲ್ಲಿ ಪಾರ್ಟಿಯೊ ಪಾಪ್ಯುಲೇರ್ (1919). ಇಟಲಿಯಲ್ಲಿ ಸ್ಥಾಪಿತವಾದ ಪಕ್ಷ ಫ್ಯಾಸಿಸ್ಟರಿಂದ ವಿಸರ್ಜಿಸಲ್ಪಟ್ಟಿತು (1926). ಈ ಪಕ್ಷ ಪುನಃಶ್ಚೇತನಗೊಂಡದ್ದು 1944ರಲ್ಲಿ. ಪಕ್ಷ ವಿಕಾಸಗೊಂಡು ಬೆಳೆದದ್ದು ಎರಡನೆಯ ಮಹಾಯುದ್ಧದ ಕೊನೆಯಲ್ಲಿ. ಕೆಥೊಲಿಕರೇ ಹೆಚ್ಚಾಗಿದ್ದ ಜರ್ಮನ್ ಪಕ್ಷ ಸ್ಥಾಪನೆಯಾದದ್ದು 1870ರಲ್ಲಿ. ಜೆóೀಂತ್ರಮ್ ಎಂಬ ಹೆಸರಿನ ಈ ಪಕ್ಷ ಸ್ವಪ್ರೇರಣೆಯಿಂದ ವಿಸರ್ಜನೆಗೊಂಡಿತು (1933). ಪಶ್ಚಿಮ ಜರ್ಮನಿಯಲ್ಲಿ ಕ್ರಿಶ್ಚನ್ ಪ್ರಜಾಸತ್ತಾತ್ಮಕ ಕೂಟ ಸ್ಥಾಪನೆಯಾದದ್ದು 1946ರಲ್ಲಿ. ಇದರಲ್ಲಿ ಕೆಥೊಲಿಕರು ಪ್ರಾಟೆಸ್ಟಂಟರು ಇಬ್ಬರೂ ಇದ್ದರು.

	ಎರಡನೆಯ ಮಹಾಯುದ್ಧಾ ನಂತರ ಪುನ:ಶ್ಚೇತನಗೊಂಡ ಹಲವು ಪಕ್ಷಗಳು ಹೊಸ ಉದ್ದೇಶಗಳಿಗೆ ಅನುಗುಣವಾಗಿ ತಮ್ಮ ಸಂವಿಧಾನವನ್ನು ಬದಲಿಸಿಕೊಂಡುವು. ಕೆಲವು ಪಕ್ಷಗಳು ತಮ್ಮ ಹೆಸರನ್ನೂ ಬದಲಿಸಿಕೊಂಡುವು. ಆ ಕಾಲದ ಜ್ವಲಂತ ಸಮಸ್ಯೆಗಳಾಗಿದ್ದ ಯೂರೋಪಿನ ಏಕತೆ, ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ ನೆರವು-ಮೊದಲಾದ ಸಮಾಜೋದ್ಧಾರಕ ಕಾರ್ಯಗಳಲ್ಲಿ ಅವು ಸಹಕರಿಸಿ ಕೆಲಸ ಮಾಡಿದವು. ಕ್ರಿಶ್ಚನ್ ಪ್ರಜಾಸತ್ತಾತ್ಮಕ ಚಳವಳಿಯ ಸಾಮಾನ್ಯ ತತ್ತ್ವಗಳಿವು ; ಬಹು ಜನರಿಗೆ ಸಹಾಯವಾಗುವಂಥ ನೀತಿ, ಎಲ್ಲ ಧಾರ್ಮಿಕ ಪಂಗಡಗಳನ್ನು ಗೌರವಿಸುವುದು, ಎಲ್ಲರೂ ಸಮಾನವಾದ ರಾಜಕೀಯ, ಸಾಮಾಜಿಕ ಹಕ್ಕುಗಳನ್ನು ಅನುಭವಿಸಬೇಕೆಂಬ ತತ್ತ್ವದ ಪ್ರತಿಪಾದನೆ, ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಗೆ ಸದವಕಾಶ ಕಲ್ಪಿಸಿಕೊಡುವುದು. ಕಲ್ಯಾಣರಾಜ್ಯ ಪಕ್ಷದ ಗುರಿಯಾದರೂ ಅದನ್ನು ಸರ್ಕಾರದ ಕಾನೂನಿನ ಮೂಲಕ ಜಾರಿಗೆ ತರುವ ವಿಷಯವನ್ನು ಪಕ್ಷ ಒಪ್ಪುವುದಿಲ್ಲ. ಜನಗಳಿಗೆ ಉಚಿತ ಶಿಕ್ಷಣ ಕೊಡುವುದರ ಮೂಲಕ ಅವರ ಕಲ್ಯಾಣವನ್ನು ಅವರೇ ಸಾಧಿಸುವಂತೆ ಮಾಡಬೇಕೆಂಬುದೇ ಈ ಪಕ್ಷದ ಗುರಿ. ವ್ಯಕ್ತಿಗಳಿಗೆ ಮತ್ತು ಗುಂಪುಗಳಿಗೆ ಹೊಣೆಗಾರಿಕೆ ವಹಿಸಿಕೊಡಬೇಕೆಂಬುದರ ಪ್ರತಿಪಾದನೆ, ಕುಟುಂಬವನ್ನು ಸ್ಥಳೀಯ ಸಮಾಜದ ಸದಸ್ಯ ಎಂದೂ ರಾಜ್ಯಗಳನ್ನು ಅಂತರರಾಷ್ಟ್ರೀಯ ಸಮಾಜದ ಸದಸ್ಯ ಎಂದೂ ಭಾವಿಸುವುದು, ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕೆಗಳ ಒಕ್ಕೂಟವನ್ನು ಬೆಂಬಲಿಸುವುದು, ಹಿಂದಿನದಕ್ಕೆ ಅಂಟಿಕುಳಿತುಕೊಳ್ಳದೇ ವಿಶಾಲ ಬದಲಾವಣೆಗೆ ಬೆಂಬಲ ನೀಡುವುದು, ಕ್ರಾಂತಿಕಾರಿ ಬದಲಾವಣೆಗೆ ವಿರೋಧ ತೋರುವುದು. ಸ್ಫರ್ದೆಯಿರುವ ರಾಜಕೀಯ ಮತ್ತು ಸಾಮಾಜಿಕ ಪ್ರಭುತ್ವವನ್ನು ಬೆಂಬಲಿಸುವುದು-ಈ ಮೊದಲಾದ ವಿಷಯಗಳಿಗೂ ಪಕ್ಷ ತನ್ನ ಬೆಂಬಲ ನೀಡುತ್ತದೆ.

	ಉದಾರವಾದಿಗಳು ಮತ್ತು ಸಮಾಜವಾದಿಗಳೊಂದಿಗೆ ಕ್ರಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳಿಗೆ ಮೊದಲಿದ್ದ ವೈಮನಸ್ಸು ಈಗೀಗ ಇಲ್ಲವಾಗಿದೆ. ಪ್ರಜಾಪ್ರಭುತ್ವ ವಿರೋಧಿಗಳ ವಿರುದ್ಧ ಈ ಪಕ್ಷ ಒಂದಾಗಿ ಹೋರಾಡುತ್ತಿದೆ.

	ಎರಡನೆಯ ಮಹಾಯುದ್ಧಾನಂತರ ಕ್ರಿಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳು ಜರ್ಮನ್ ಫೆಡರಲ್ ರಿಪಬ್ಲಿಕ್, ಇಟಲಿ, ನೆದರ್ಲೆಂಡ್ಸ್, ಬೆಲ್ಜಿಯಂ, ಆಸ್ಟ್ರಿಯಗಳ ಪಾರ್ಲಿಮೆಂಟುಗಳಲ್ಲಿ ನಿಚ್ಚಳ ಬಹುಮತಗಳಿಸಿದುವು. ಇಲ್ಲದೇ ಬಹುಮತಕ್ಕೆ ಸಮೀಪ ಬಂದುವು. ಫ್ರಾನ್ಸ್, ಸ್ವಿಟ್ಜರ್ಲೆಂಡ್, ಲಕ್ಸಂಬರ್ಗ್‍ಗಳ ಪಾರ್ಲಿಮೆಂಟುಗಳಲ್ಲಿ ಅವು ಪ್ರಭಾವಶಾಲಿಯಾದುವು. ಲ್ಯಾಟಿನ್ ಅಮೆರಿಕದಲ್ಲಿ ಈ ಪಕ್ಷಗಳ ಪ್ರಭಾವ 1945ರ ಆನಂತರ ಪ್ರಬಲವಾಯಿತು. ಪೋಲೆಂಡ್, ಹಂಗರಿ, ಜೆಕೊಸ್ಲೊವಾಕಿಯ ಮತ್ತು ಬಾಲ್ಟಿಕ್ ರಾಜ್ಯಗಳಲ್ಲಿ ಕಮ್ಯೂನಿಸ್ಟ್ ನಿರಂಕುಶ ಪ್ರಭುತ್ವ ತಲೆ ಎತ್ತುವವರೆಗೂ ಕ್ರಿಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳ ರಾಜಕೀಯ ಚಳವಳಿ ಊರ್ಜಿತವಾಗಿತ್ತು. ಸ್ಪೇನಿನ ಅಂತರ್‍ಯುದ್ಧದಲ್ಲಿ ಜನರಲ್ ಫ್ರಾನ್ಸಿಸ್ಕೊ ಫ್ಯಾಂಕೋನ ವಿಜಯದವರೆಗೂ ಈ ಪಕ್ಷ ಬಲವಾಗಿತ್ತಲ್ಲದೇ ಈ ದೇಶಗಳಲ್ಲಿಯ ನಾಗರಿಕರು ಸೆರೆಮನೆಯಲ್ಲೂ ಚಳವಳಿ ನಡೆಸಿದ್ದುಂಟು. ಲ್ಯಾಟಿನ್ ಅಮೆರಿಕನ್ ಪಕ್ಷಗಳೂ ಕ್ರಿಶ್ಚನ್ ಪ್ರಜಾಸತ್ತಾತ್ಮಕ ಸಂಘವನ್ನು ಸ್ಥಾಪಿಸಿದ್ದು 1949ರಲ್ಲಿ. ಯುವಕ ಕ್ರಿಶ್ಚನ್ ಪ್ರಜಾಸತ್ತಾತ್ಮಕ ಅಂತರರಾಷ್ಟ್ರೀಯ ಸಂಘವೊಂದು 1948ಕ್ಕೆ ಆಗಲೆ ಸ್ಥಾಪನೆಯಾಗಿತ್ತು. ಕ್ರಿಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳ ಮೊದಲ ವಿಶ್ವಸಮ್ಮೇಳನ 1956ರಲ್ಲೂ ಎರಡನೆಯದು 1958ರಲ್ಲೂ ನಡೆಯಿತಲ್ಲದೇ ಅಂತರ ಖಂಡೀಯ ಕ್ರಿಶ್ಚನ್ ಪ್ರಜಾಪ್ರಭುತ್ವ ಸಮಿತಿಯೊಂದು ಸ್ಥಾಪನೆಯಾಯಿತು. ಕ್ರಿಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳಲ್ಲಿ ಹೆಚ್ಚಿನವು ಕ್ರಿಶ್ಚನ್ ಎಂಬ ಪದವನ್ನು ಪಕ್ಷದ ಹೆಸರಿನಲ್ಲಿ ಬಳಸುತ್ತವೆ. ಫ್ರೆಂಚ್ ಎಂ.ಆರ್.ಪಿ. ತನ್ನ ಹೆಸರಿನಲ್ಲಾಗಲಿ, ನಿಯಮಾವಳಿಯಲ್ಲಾಗಲಿ ಕ್ರಿಶ್ಚನ್ ಪದ ಬಳಸುತ್ತಿಲ್ಲ. ಪ್ರಾಟೆಸ್ಟಂಟ್ ಮತ್ತು ಕೆಥೊಲಿಕರಿಬ್ಬರೂ ಈ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ. ನೆದರ್ಲೆಂಡ್ಸ್ ಮತ್ತು ಜರ್ಮನ್ ಫೆಡರಲ್ ರಿಪಬ್ಲಿಕ್‍ಗಳಲ್ಲಿ ಪ್ರಾಟೆಸ್ಟೆಂಟರ ಬೆಂಬಲ ಈ ಪಕ್ಷಗಳಿಗೆ ಸಾಕಷ್ಟಿದೆ. ನಾರ್ವೆಯಲ್ಲಿ ಈ ಪಕ್ಷ ಸಂಪೂರ್ಣವಾಗಿ ಪ್ರಾಟೆಸ್ಟಂಟರದು.

	ಕ್ರಿಶ್ಚನ್ ಪ್ರಜಾಸತ್ತಾತ್ಮಕ ಪಕ್ಷಗಳ ಸಂವಿಧಾನದಲ್ಲಿ ಆಗಿರುವ ಹೊಸ ಬದಲಾವಣೆಯಂತೆ ಪಕ್ಷದ ಸದಸ್ಯತ್ವ ಕೆಥೊಲಿಕರು, ಪ್ರಾಟೆಸ್ಟಂಟರಿಗಷ್ಟೇ ಮೀಸಲಲ್ಲ. ಇತರ ಧರ್ಮಗಳವರಿಗೂ ಮಾನವತಾವಾದಿಗಳಿಗೂ ಅದು ತೆರೆದಿದೆ. ಒಂದನೆಯ ಮಹಾಯುದ್ಧ ಮುಗಿಯುವ ವರೆಗೂ ಚರ್ಚು ಮತ್ತು ಪಕ್ಷಗಳ ವ್ಯತ್ಯಾಸ ಸ್ಪಷ್ಟವಾಗಿರಲಿಲ್ಲ. ಆದ್ದರಿಂದ ಹಲವು ರಾಜ್ಯಗಳಲ್ಲಿ ಇದು ವೈಮನಸ್ಸಿಗೆ ಎಡೆಮಾಡಿಕೊಟ್ಟಿತ್ತು. ಆದರೆ 1945ರ ಅನಂತರ ವೈಮನಸ್ಯ ಕಡಿಮೆಯಾಯಿತಲ್ಲದೆ ಚರ್ಚು ಮತ್ತು ಪಕ್ಷಗಳ ನಡುವೆ ಸಹಕಾರ ಸೌಹಾರ್ದಗಳೂ ಏರ್ಪಟ್ಟಿವೆ.											*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ